ಪೂರ್ವಕೇಂಬ್ರಿಯನ್ ಕಾಲ -
 	ಭೂವಿಕಾಸದ ಮಾಪಕದಲ್ಲಿ ಸುಮಾರು ಅರುವತ್ತು ಕೋಟಿ ವರ್ಷಗಳಷ್ಟು ಪ್ರಾಚೀನ ಕಾಲದಿಂದ ಹಿಂದಿನ (ಮತ್ತೂ ಭೂತಕಾಲದೆಡಗಿನ) ಸುಮಾರು ಮುನ್ನೂರು ಕೋಟಿ ವರ್ಷಗಳ ತನಕದ ಅವಧಿ. ಸುಮಾರು ನಾನೂರ ಅರುವತ್ತು ಕೋಟಿ ವರ್ಷಗಳ ಹಿಂದೆ ಭೂತೊಗಟೆ ಮೈದಳೆಯಿತು. ಸುಮಾರು ಐವತ್ತೇಳು ಕೋಟಿ ವರ್ಷಗಳ ಹಿಂದೆ ಕೇಂಬ್ರಿಯನ್ ಯುಗ ಪ್ರಾರಂಭವಾಯಿತು. ಸ್ಥೂಲವಾಗಿ ಈ ಎರಡೂ ಘಟನೆಗಳ ನಡುವಿನ ಅವಧಿಯನ್ನು ಪೂರ್ವ ಕೇಂಬ್ರಿಯನ್ ಕಾಲವೆಂದು ಗುರುತಿಸಿದೆ. ಭೂ ಇತಿಹಾಸದಲ್ಲಿ ಕೇಬ್ರಿಯನ್ ಯುಗ ಪ್ರಥಮ ಘಟ್ಟವೆನಿಸಿದೆ. ಆ ಕಾಲದಲ್ಲಿ ವ್ಯಾಪಕವಾಗಿದ್ದ ವೈವಿಧ್ಯಮಯವಾದ ಜೀವ ವಿಶೇಷ ಅಥವಾ ಪಳೆಯುಳಿಕೆಗಳು ಜಲಜಶಿಲೆಗಳಲ್ಲಿ ದೊರೆತಿವೆ.

	ಕೇಂಬ್ರಿಯನ್ ಯುಗದ ಪ್ರಾರಂಭಕ್ಕೂ ಮುನ್ನ ಜೀವೋತ್ಪತ್ತಿಯಾಯಿತೆಂದೂ ಪೂರ್ವ ಕೇಂಬ್ರಿಯನ್ ಕಾಲಕ್ಕೂ ಅದರಿಂದೀಚಿನ ಎಲ್ಲ ಭೂಕಾಲಗಳಿಗೂ ಒಂದು ತೆರನಾದ ಮೂಲ ಭೇದವಿರುವುದೆಂದೂ ಒಮ್ಮೆ ಭಾವಿಸಲಾಗಿತ್ತು. ಆದರೆ ಮೂಲ ಜೀವಿಗಳು ಸುಮಾರು ಮುನ್ನೂರು ಕೋಟಿ ವರ್ಷಗಳಿಗೂ ಹಿಂದೆ ಅಸ್ತಿತ್ವದಲ್ಲಿದ್ದುವು ಎಂಬುದು ಇಂದಿನ ಅಭಿಪ್ರಾಯ. ಪೂರ್ವ ಕೇಂಬ್ರಿಯನ್ ಕಾಲದಲ್ಲಿ ಎಲ್ಲ ಭಾಗಗಳಲ್ಲೂ ಜೀವಿಗಳು ಕಂಡುಬರಲಿಲ್ಲ ನಿಜ. ಆದರೆ, ಆ ಕಾಲದುದ್ದಕ್ಕೂ ಜೀವಿಗಳಿದ್ದುವು ಎಂಬುದು ಇಂದಿನ ಭಾವನೆ. ಭೂಕಾಲದ ಬಹುಭಾಗವನ್ನು ಪ್ರಾಗ್ಜೀವಕಲ್ಪ (ಪೇಲಿಯೊಜೋಯಿಕ್) ಆಕ್ರಮಿಸಿಕೊಂಡಿದೆ.

	ಭೂತೊಗಟೆಯ ರಚನೆಯಿಂದೀಚಿನ ಕಾಲದ ಹತ್ತನೆಯ ಒಂದು ಭಾಗಕ್ಕಿಂತಲೂ ಹೆಚ್ಚು ಕಾಲವನ್ನು ಕೇಂಬ್ರಿಯನ್ ಮತ್ತು ಅದರ ತರುವಾಯದ ಎಲ್ಲ ಭೂಕಾಲಗಳು ಪ್ರತಿನಿಧಿಸುತ್ತವೆ. ಪೂರ್ವ ಕೇಂಬ್ರಿಯನ್ ಕಾಲದ ವಿಭಜನೆಯ ಬಗೆಗೆ ಸರ್ವಸಮ್ಮತವಾದ ವಿಧಾನವೊಂದು ಇನ್ನೂ ಒಪ್ಪಿಗೆಯಾಗದಿರುವುದು ಗಮನಾರ್ಹ ಅಂಶ. ಪೂರ್ವ ಕೇಂಬ್ರಿಯನ್ ಕಾಲದ ಆದಿಭಾಗವನ್ನು ಆರ್ಷೇಯ ಜೀವಕಲ್ಪವೆಂದೂ ಅದರ ನವೀನ ಭಾಗವನ್ನು ಆದಿಜೀವ ಕಲ್ಪವೆಂದೂ ಹೆಸರಿಸಲಾಗಿದೆ. ಆದರೆ, ಕೆಲವು ಭೂವಿಜ್ಞಾನಿಗಳ ಪ್ರಕಾರ ಈ ಎರಡೂ ವಿಭಾಗಗಳ ಎಲ್ಲೆಯ ಬಗೆಗೆ ಇನ್ನೂ ಇತ್ಯರ್ಥವಾಗಬೇಕಾಗಿದೆ. ಕೆಲವು ಆಧಾರಗಳ ಪ್ರಕಾರ ಈ ಎಲ್ಲೆಯ ಮಿತಿ ಸುಮಾರು ಇನ್ನೂರ ಐವತ್ತು ಕೋಟಿ ವರ್ಷಗಳೆಂದು ತಿಳಿದುಬಂದಿದೆ. ಪೂರ್ವ ಕೇಂಬ್ರಿಯನ್ ಶಿಲೆಗಳ ಹೊರಚಾಚುಗಳಿರುವ ಪ್ರತಿಯೊಂದು ಮುಖ್ಯವಾದ ಭಾಗದಲ್ಲಿ ಆ ಶಿಲೆಗಳನ್ನು ಸ್ಥಳೀಯವಾಗಿ ವಿಭಾಗಿಸಿ, ಅವುಗಳ ವಿತರಣೆಯನ್ನು ಗುರುತಿಸಲಾಗಿದೆ.

	ಪೂರ್ವ ಕೇಂಬ್ರಿಯನ್ ಕಾಲದ ದಾಖಲೆಯ ಸಾಮಾನ್ಯ ಲಕ್ಷಣಗಳು : ಸ್ಥೂಲವಾಗಿ ಹೇಳುವುದಾದರೆ ಪೂರ್ವ ಕೇಂಬ್ರಿಯನ್ ಕಾಲದ ಶಿಲೆಗಳು ಹಲವಾರು ನೂರು ಕಿ.ಮೀ.ಗಳಷ್ಟು ವಿಶಾಲವಾದ ಸಮಾಂತರ ಪ್ರದೇಶಗಳಲ್ಲಿ ಉದ್ದಕ್ಕೂ ಹೊರಚಾಚಿರುವುದು ಕಂಡುಬಂದಿದೆ. ಉತ್ತರ ಅಮೆರಿಕದ ಮೈದಾನ, ಜರ್ಮನಿಯ ತಗ್ಗು ಪ್ರದೇಶಗಳು ಮತ್ತು ಬಾಲ್ಟಿಕ್ಕಿನ ದಕ್ಷಿಣ ಮತ್ತು ಪೂರ್ವ ಭಾಗಗಳ ಸಂಚಯನಗಳಲ್ಲಿರುವ ನವೀನ ನಿಕ್ಷೇಪಗಳ ಕೆಳಗೆ ಇತರ ಪೂರ್ವ ಕೇಂಬ್ರಿಯನ್ ಶಿಲೆಗಳು ಅಡಗಿವೆ. ಸಮತಲವಾದ ನವೀನ ನಿಕ್ಷೇಪಗಳ ಕೆಳಗಿರುವ ಈ ಶಿಲೆಗಳು ಆ ಕಾಲದಿಂದೀಚಿಗೆ ಸ್ವಲ್ಪ ಬದಲಾಗಿವೆ. ಆಳವಾಗಿ ಕೊರೆದ ರಂಧ್ರಗಳಿಂದ ಸಂಗ್ರಹಿಸಲಾದ ಶಿಲಾ ಪ್ರತಿಚಯಗಳ ವಿಶ್ಲೇಷಣೆಗಳಿಂದ ಮತ್ತು ಅವುಗಳ ಮೇಲೆ ನಡೆಸಲಾದ ಶೋಧನೆ ಮತ್ತು ವಯೋನಿರ್ಧಾರಗಳಿಂದ ಅಂಥ ಬದಲಾವಣೆಗಳನ್ನು ಗುರುತಿಸಲಾಗಿದೆ.

	ಕೇಂಬ್ರಿಯನ್ ಕಾಲದ ಮೂರನೆಯ ಬಗೆಯ ಶಿಲೆಗಳು, ಆ ಕಾಲದಿಂದೀಚಿಗೆ ಉದ್ಭವಿಸಿದ ಪರ್ವತ ಶ್ರೇಣಿಗಳಲ್ಲಿ ಕಾಣಿಸಿಕೊಳ್ಳುತ್ತವೆ. ವಿಪರೀತ ಮಾರ್ಪಾಡುಗೊಂಡ ಇವು ಅಪಾರ ಉಷ್ಣ ಮತ್ತು ಸಂಮರ್ದಗಳಿಂದ ರೂಪಾಂತರ ಹೊಂದಿ ಷಿಫ್ಟ್ಸ್ ಮತ್ತು ನೈಸ್‍ಗಳಿಗೆ ಪರಿವರ್ತನೆಯಾಗಿ ಈ ಪರ್ವತ ಶ್ರೇಣಿಗಳಲ್ಲಿ ಅಡಕವಾಗಿವೆ. ಪಶ್ಚಿಮ ನಾರ್ವೆ ಅಪಲೇಷಿಯನ್ ಪರ್ವತಗಳು ಇದಕ್ಕೆ ಉದಾಹರಣೆಗಳು. 

	ಪ್ರತಿ ಭೂಖಂಡದ ವಿಶಾಲವಾದ ಪ್ರದೇಶದಲ್ಲೂ ಪೂರ್ವ ಕೇಂಬ್ರಿಯನ್ ಶಿಲಾ ಸ್ತೋಮಗಳು ವ್ಯಾಪಕವಾಗಿ ಹೊರಚಾಚಿರುವುದು ಕಂಡುಬರುತ್ತದೆ. ಇಂಥ ಪ್ರದೇಶಗಳಿಗೆ ಶೀಲ್ಡ್ ಭಾಗಗಳೆಂದು ಹೆಸರು. ಇವುಗಳ ಪೈಕಿ ಅತಿ ದೊಡ್ಡ ಶೀಲ್ಡುಗಳೆಂದರೆ ಕೆನಡಿಯನ್ ಶೀಲ್ಡ್, ಗ್ರೀನ್‍ಲೆಂಡ್, ಸ್ಕ್ಯಾಂಡಿನೇವಿಯ ಮತ್ತು ಸೋವಿಯತ್ ದೇಶದ ನೆರೆ ಭಾಗಗಳು (ಬಾಲ್ಟಿಕ್ ಶೀಲ್ಡ್), ಸೈಬೀರಿಯಾ, ಚೀನ, ಭಾರತದ ಪರ್ಯಾಯ ದ್ವೀಪ, ಗಯಾನ, ಬ್ರೆಜಿಲ್, ಅಂಟಾರ್ಟಿಕ್, ಅಟ್ಲಾಸ್ ಪರ್ವತಗಳ ದಕ್ಷಿಣಕ್ಕಿರುವ ಆಫ್ರಿಕಾ ಖಂಡದ ಬಹು ಭಾಗಗಳು ಮತ್ತು ಪಶ್ಚಿಮ ಆಸ್ಟ್ರೇಲಿಯಾ.

	ಸಮತಟ್ಟಾದ ನವೀನ ನಿಕ್ಷೇಪಗಳ ಕೆಳಗೆ ಹುದುಗಿರುವ ಪೂರ್ವ ಕೇಂಬ್ರಿಯನ್ ಶಿಲಾ ಸಮೂಹಗಳಿಗೆ ಪ್ಲಾಟ್‍ಫಾರಮ್ ಎಂಬ ಶಬ್ದ ಬಳಕೆಯಲ್ಲಿದೆ. ಉದಾಹರಣೆಗೆ ರಷ್ಯ ಮತ್ತು ಅಮೆರಿಕದಲ್ಲಿರುವ ಪ್ಲಾಟ್‍ಫಾರಮುಗಳು ಬಹು ವ್ಯಾಪಕವಾಗಿ ವಿತರಣೆಯಾಗಿರುವ ಪೂರ್ವ ಕೇಂಬ್ರಿಯನ್ ಶಿಲಾ ಸಮೂಹಗಳು ಹೀಗಿವೆ : 

1. ಶೀಲ್ಡ್ ಪ್ರದೇಶಗಳು

2. ಪ್ಲಾಟ್‍ಫಾರಮುಗಳು

3. ನವೀನ ಪರ್ವತ ಶ್ರೇಣಿಗಳಲ್ಲಿ ಅಡಕವಾಗಿರುವ ಪೂರ್ವ ಕೇಂಬ್ರಿಯನ್ ಕಾಲದ ರೂಪಾಂತರ ಶಿಲೆಗಳು

	ಪೂರ್ವ ಕೇಂಬ್ರಿಯನ್ ಕಾಲದಿಂದಲೇ ಭೂತೊಗಟೆಯ ರಚನೆಯಾಗಿದ್ದುದು ಇದರಿಂದ ವ್ಯಕ್ತವಾಗುತ್ತದೆ. ಇದಕ್ಕೆ ವಿರುದ್ಧವಾಗಿ ಸೇಶೆಲ್ಸ್ ದ್ವೀಪಗಳ ಹೊರತಾಗಿ ಪ್ರಮುಖ ಸಾಗರಗಳ ಕೆಳಗೆ ಪೂರ್ವ ಕೇಂಬ್ರಿಯನ್ ಶಿಲೆಗಳು ದೊರೆಯುವುದಿಲ್ಲ. ಹಿಂದೆ ಭೂಖಂಡಗಳು ಅಲೆಯುತ್ತಿದ್ದ ವೇಳೆ ಭೂಖಂಡವೊಂದು ಒಡೆದು ಛಿದ್ರವಾದಾಗ ಅದರ ತುಂಡುಗಳಿಂದ ಸೇಶೆಲ್ಸ್ ದ್ವೀಪಗಳ ರಚನೆಯಾಯಿತು ಎಂಬ ಅಭಿಪ್ರಾಯ ಉಂಟು.

	ಪೂರ್ವ ಕೇಂಬ್ರಿಯನ್ ಶಿಲೆಗಳು ತಿರುಳಿನಂತಿದ್ದು, ಇವುಗಳ ಸುತ್ತ ಪ್ರತಿ ಭೂಖಂಡವೂ ಕ್ರಮವಾಗಿ ಉದ್ಭವಿಸಿ ಕ್ರಮೇಣ ಒಂದರ ಮೇಲೊಂದರಂತೆ ಖಂಡಾಂತರ ವಲಯಗಳ ಹೊರಪದರಗಳು ಸೇರಿಕೊಂಡವು ಎಂಬ ಭಾವನೆ ಇತ್ತು. ಭೂವೈಜ್ಞಾನಿಕ ದೃಷ್ಟಿಯಿಂದ ನೋಡಿದರೆ ಮಿಸಿಸಿಪ್ಪಿ ಅಥವಾ ನೈಲ್ ನದೀಮುಖಜ ಭೂಮಿಯಂಥ ಭಾಗಗಳು ಇತ್ತೀಚಿನ ಸೇರ್ಪಡೆಗಳಾಗಿದ್ದರೂ ಪ್ರಾಚೀನ ಜೀವಕಲ್ಪದ (ಜೀವಯುಗ) ಮತ್ತು ನವೀನ ಯುಗಗಳ ಪರ್ವತ ಶ್ರೇಣಿಗಳು ಶೀಲ್ಡುಗಳ ಅಂಚಿಗೆ ಲಗತ್ತಾಗಿರುವುದು ವಾಸ್ತವವೆವಿಸಿದರೂ ನವೀನ ಶಿಲೆಗಳ ಸತತ ಸೇರ್ಪಡೆಯಿಂದ ಖಂಡಗಳ ಬೆಳವಣಿಗೆ ಸಾಧ್ಯವೆಂಬ ಪರಿಕಲ್ಪನೆ ಸ್ವಲ್ಪ ಅಸಮಂಜಸವೆನಿಸುತ್ತದೆ. ಇದಕ್ಕೊಂದು ದೃಷ್ಟಾಂತ ಕೊಡಬಹುದು : ನಮಗೆ ತಿಳಿದಿರುವ ಪೂರ್ವ ಕೇಂಬ್ರಿಯನ್ ಶಿಲೆಗಳು ಭೂಖಂಡಗಳ ಅಂಚನ್ನು ಸಮೀಪಿಸಿದಾಗ ಅವು ಕ್ರಮಶಃ ನವೀನ ಅಥವಾ ಕಿರಿಯ ಶಿಲೆಗಳಾಗಿರದೆ ವಿವಿಧ ಕಾಲದ ಶಿಲೆಗಳ ಗುಂಪಿನ ಜಾಲಗಳನ್ನು ನಿರ್ಮಿಸುವುದು ಕಂಡುಬರುತ್ತದೆ. ಭೂಮ್ಯಾದ್ಯಂತ ವ್ಯಾಪಕವಾಗಿ ಹೊರಚಾಚಿರುವ ಪೂರ್ವ ಕೇಂಬ್ರಿಯನ್ ಶಿಲಾ ಭಾಗಗಳು ಕೆಲವು ನಿರ್ದಿಷ್ಟ ನಿಯಮಗಳಿಗೆ ಅನುಗುಣವಾಗಿರುವುದು ತಿಳಿದುಬರುತ್ತದೆ. ಇವುಗಳ ಪೈಕಿ ಕೆಲವು ಭಾಗಗಳ ಹೊರತಾಗಿ ಪೆಸಿಫಿಕ್ ಸಾಗರದ ತೀರಕ್ಕೆ ಸಮೀಪದಲ್ಲಿರುವ ಮತ್ತು ಆಲ್ಟ್ಸ್ ಮತ್ತು ಹಿಮಾಲಯ ಪರ್ವತ ಶ್ರೇಣಿಗಳುದ್ದಕ್ಕೂ ಚಾಚಿರುವ ಪೂರ್ವ ಕೇಂಬ್ರಿಯನ್ ಶಿಲೆಗಳು ಆ ಪರ್ವತ ಶ್ರೇಣಿಗಳ ಅಂಗಭಾಗಗಳಾಗಿವೆ. ಆ ಪ್ರದೇಶಗಳಲ್ಲಿ ಪ್ರತಿಯೊಂದು ಪೂರ್ವ ಕೇಂಬ್ರಿಯನ್ ಶಿಲೆಯೂ ತೀವ್ರ ಸ್ವರೂಪದ ರೂಪಾಂತರ ಕ್ರಿಯೆಗಳದಾಗಿರುವುದು ಕಂಡು ಬರುತ್ತದೆ. 

	ಮಧ್ಯ ಜೀವಯುಗದಿಂದೀಚೆಗೆ, ಭೂಖಂಡಗಳ ಮೇಲೆ, ಕಂಡುಬರುವ ಹೋಲಿಕೆಯಲ್ಲಿ ಹಿಂದೂ ಮಹಾಸಾಗರ ಅಥವಾ ಅಟ್ಲಾಂಟಿಕ್ ಸಾಗರಗಳಲ್ಲಿ ಹೊರಚಾಚಿರುವ ಪೂರ್ವ ಕೇಂಬ್ರಿಯನ್ ಶಿಲೆಗಳು ಈ ಕಿರಿಯ ಸಾಗರಗಳಿಗೆ ಸಮೀಪದಲ್ಲಿರುವ ಶೀಲ್ಡ್ ಪ್ರದೇಶಗಳಲ್ಲಿ ಸಿಗುತ್ತವೆ. ಇದೇ ರೀತಿ ಬ್ರೆಜಿಲ್, ಗಯಾನ, ಕೆನಡ, ಬಾಲ್ಟಿಕ್, ಮತ್ತು ಪಶ್ಚಿಮ ಆಫ್ರಿಕದ ಶೀಲ್ಡ್ ಭಾಗಗಳಲ್ಲಿ ಅಟ್ಲಾಂಟಿಕ್ ಸಾಗರದ ಅಂಚಿನಲ್ಲೂ ಪೂರ್ವ ಆಫ್ರಿಕ, ಭಾರತ, ಪಶ್ಚಿಮ ಆಸ್ಟ್ರೇಲಿಯ ಹಾಗೂ ಅಂಟಾರ್ಕ್‍ಟಿಕದ ಶೀಲ್ಡ್ ಭಾಗಗಳಲ್ಲಿ ಹಿಂದೂ ಮಹಾಸಾಗರದ ಸುತ್ತಲೂ ಪೂರ್ವ ಕೇಂಬ್ರಿಯನ್ ಶಿಲೆಗಳು ಸಿಗುತ್ತವೆ. ಸಮತಟ್ಟಾದ ಜಲಜಶಿಲೆಗಳ ಕೆಳಗೆ ಅಡಗಿರುವ ಪೂರ್ವ ಕೇಂಬ್ರಿಯನ್ ಶಿಲೆಗಳನ್ನು ಒಳಗೊಂಡ ಪ್ಲಾಟ್‍ಫಾರಮುಗಳು ಸಾಮಾನ್ಯವಾಗಿ ಶೀಲ್ಡ್ ಪ್ರದೇಶಗಳಿಗೂ ಯೌವನಾವಸ್ಥೆಯಲ್ಲಿರುವ ಆಲ್ಟೈನ್ ಅಥವಾ ಶಾಂತ ಮಹಾಸಾಗರದ ಸುತ್ತಲೂ ಹಬ್ಬಿರುವ ಪರ್ವತ ಶ್ರೇಣಿಗಳಿಗೂ ನಡುವೆ ತೀವ್ರವಾಗಿ ಮಾರ್ಪಾಡಾದ ಪೂರ್ವ ಕೇಂಬ್ರಿಯನ್ ಕಾಲದ ಅವಶೇಷಗಳಾಗಿ ನಿಂತಿವೆ. 

	ಭೂವೈಜ್ಞಾನಿಕ ಪ್ರಾಮುಖ್ಯ : ಒಟ್ಟಿನಲ್ಲಿ ಹೇಳುವುದಾದರೆ ಇಂದು ನಮ್ಮ ಅಧ್ಯಯನಕ್ಕೆ ಲಭ್ಯವಾದ ಪೂರ್ವ ಕೇಂಬ್ರಿಯನ್ ಶಿಲೆಗಳು ಆ ಕಾಲದ ಸಂಪೂರ್ಣ ದಾಖಲೆಗಳನ್ನು ಒದಗಿಸಲು ಅಸಮರ್ಥವಾಗಿವೆ. ಭೂಸವೆತ ಮತ್ತು ಮಡ್ಡಿ ಅಥವಾ ಚರಟ ಸಂಚಯನದ ಕಾರ್ಯಕರ್ತೃಗಳು ಇಂದಿನಂತೆಯೇ ಸುಮಾರು ಮುನ್ನೂರ ಇಪ್ಪತ್ತು ಕೋಟಿ ವರ್ಷಗಳ ಹಿಂದೆಯೂ ಭೂತೊಗಡೆಯನ್ನು ಬಾಧಿಸುತ್ತಿದ್ದವು ಎಂಬ ಅಂಶವನ್ನು ತೋರಿಸಲು ಈ ಪೂರ್ವ ಕೇಂಬ್ರಿಯನ್ ಶಿಲೆಗಳು ಆಸಮರ್ಥವಾಗಿವೆ. ನೀಲಿ-ಹಸಿರು ವರ್ಣದ ಸಮುದ್ರ ಪಾಚಿಗಳು ಮತ್ತೆ ಕೆಲವು ಜೀವಾಣುಗಳು ಪೂರ್ವ ಕೇಂಬ್ರಿಯನ್ ಕಾಲದಲ್ಲಿ ಆಗಲೇ ವಿಕಾಸಗೊಂಡಿದ್ದುವು. ಇವಲ್ಲದೆ ಕಾಲಕಾಲಕ್ಕೆ ಭೂತೊಗಟೆಯಲ್ಲಿ ವಿವಿಧ ಭಾಗಗಳು ಅತ್ಯುಷ್ಣದಿಂದ ಕಾದು ಬಿಸಿಯಾಗಿ ವಿಕೃತಗೊಂಡುದರಿಂದ ಸ್ಫಟಿಕ ರೂಪಾಂತರ ಶಿಲೆಗಳು ಉತ್ಪತ್ತಿಯಾದುವು. ಈ ಅಂಶವನ್ನು ಸಹ ಪೂರ್ವ ಕೇಂಬ್ರಿಯನ್ ಶಿಲೆಗಳ ಸ್ವರೂಪ ಅಥವಾ ಅವುಗಳ ಲಕ್ಷಣಗಳಿಂದ ಕಾಣಬಹುದು. ಈ ಶಿಲೆಗಳು ಇತ್ತೀಚಿಗೆ ಉದ್ಭವಿಸಿದ ಪರ್ವತ ಶ್ರೇಣಿಗಳ ಮಧ್ಯೆ ಇರುವ ಶಿಲೆಗಳನ್ನು ಹೋಲುತ್ತವೆ. ಆದರೆ, ಪೂರ್ವ ಕೇಂಬ್ರಿಯನ್ ಕಾಲದ ಸ್ಫಟಿಕ ರೂಪಾಂತರ ಶಿಲೆಗಳು ಪರ್ವತಗಳ ರಚನೆಗೆ ಸಂಬಂಧಿಸಿದವೇ ಅಥವಾ ಭೂ ಇತಿಹಾಸದ ಪ್ರಾರಂಭಕ್ಕೂ ಮುನ್ನ ಭೂ ತೊಗಟೆಯೇ ವಿಕೃತಗೊಂಡು ನಾನಾ ರೂಪಗಳನ್ನು ತಳೆದವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 

	ಪೂರ್ವ ಕೇಂಬ್ರಿಯನ್ ಕಾಲದ ಘಟನಾವಳಿಗಳ ಸಮಗ್ರ ವಯೋನಿರ್ಧಾರ : ಶಿಲೆಗಳ ವಯೋ ನಿರ್ಧಾರಕ್ಕಾಗಿ ಪೊಟ್ಯಾಸಿಯಮ್-40 ವಿಧಾನ (ಏ-40,) ರುಬಿಡಿಯಮ್-87 ವಿಧಾನ (ಖb-87) ಎಂಬ ಎರಡು ವಿಧಾನಗಳನ್ನು ವ್ಯಾಪಕವಾಗಿ ಅನುಸರಿಸುತ್ತಾರೆ. ಮುಂದಿನ ಯಾದಿಯಲ್ಲಿ ಕೆಲವು ಮುಖ್ಯ ಘಟನೆಗಳ ಕಾಲ ನಿರ್ಣಯಗಳನ್ನು ನಮೂದಿಸಿದೆ. 
ಪೂರ್ವಕೇಂಬ್ರಿಯನ್ ಕಾಲದ ಕೆಲವು ಘಟನೆಗಳು ಮತ್ತು ಅವುಗಳ ಕಾಲಸೂಚಿ

ಉತ್ತರ ಅಮೇರಿಕ

ಬ್ರಿಟಿಷ್ ದ್ವೀಪಗಳು

ಆಫ್ರಿಕ

ಆಸ್ಟ್ರೇಲಿಯ 

ವಯಸ್ಸು(ಕೋಟಿ ವರ್ಷಗಳ)

ಡಯಬೇಸ್ ಡೈಕ್ಸ್

ಮಯೋನಿಯಮ್ ರೂಪಾಂತರ ಕ್ರಿಯೆ, ಟಾರಿಡೋನಿಯಮ್ ನಿಕ್ಷೇಪಗಳ ರಚನೆ

ಮೂನ್‍ಲೈಟ್ ಕಣಿವೆಯ ನೀರ್ಗಲ್ಲು ಕ್ರಿಯೆ
80

ಗ್ರೆನ್‍ವಿಲ್ಲಿಪ್ಲೂಟಾನಿಸಮ್

ಪೆಗ್ಮಟೈಟ್ಸ್, ಆರೆಂಜ್ ನದಿ
ಪೆಗ್ಮಟೈಟ್ಸ್,ಪಶ್ಚಿಮ ಆಸ್ಟ್ರೇಲಿಯ 
100

ಡಲ್ಲತ್ ಗ್ಯಾಬ್ರೊ, ಕೀವಾನಾವಾನ್ ಶಿಲಾರಸ

ಪೆಗ್ಮಟೈಟ್ಸ್,ಫ್ರೇಸರ್‍ರೇಂಜ್, ಪಶ್ಚಿಮ ಆಸ್ಟ್ರೇಲಿಯ
120

ಲೇಟ್ ಲ್ಯಾಕ್ಸ್‍ಫೋರ್ಡಿಯನ್ ಗ್ರ್ಯಾನೈಟ್
ಕರಾಗ್ವಿ/ಅಂಕೋಲಿಯನ್ ಪ್ಲೂಟಾನಿಸಮ್ ಉಬೆಂಡಿಯನ್ ಪ್ಲೂಟಾನಿಸಮ್

140

160

ಹಡ್‍ಸೋನಿಯಮ್ ಪ್ಲೂಟಾನಿಸಮ್ ಪ್ರಾರಂಭ
ಲ್ಯಾಕ್ಸ್‍ಫೋರ್ಡಿಯನ್ ಪ್ಲೂಟಾನಿಸಮ್ ಪ್ರಾರಂಭ

ಹಾಲ್ಸ್‍ಕ್ರೀಕ್ ಗ್ರ್ಯಾನೈಟ್
180

ಡಯಬೇಸ್ ಡೈಕ್ಸ್
ಸ್ಕೌರಿಡಯಾಬೇಸ್ ಡೈಕುಗಳು
ಲೊಂಪೊಪೊ ರೂಪಂತರ ಕ್ರಿಯೆ ಅಂತ್ಯ

200

ಲೇಟ್‍ಸ್ಕೌರಿಯನ್ ಪೆಗ್ಮಟೈಟ್ಸ್

ಗ್ರೇಟ್ ಡೈಕ್ 
ಡಯಬೇಸ್ ಡೈಕ್ಸ್, ,ಪಶ್ಚಿಮ ಆಸ್ಟ್ರೇಲಿಯ
240

ಶ್ಯಾಮ್‍ವಾಯನ್‍ಪ್ಲೂಟಾನಿಸಮ್
ಎಗಾರ ಬ್ಲಾಕ್‍ರಚನೆಯ ಅಂತ್ಯ
260

ಕೆನೋರಾನ್‍ಪ್ಲೂಟಾನಿಸಮ್
ಸ್ಕೌರಿಯನ್‍ಪ್ಲೂಟಾನಿಸಮ್ ಪ್ರಾರಂಭ
ಬುಲವಾಯನ್‍ಪ್ಲೂಟಾನಿಸಮ್

280

ಕೀವಾಟಿನ್ ಗ್ರೀನ್ ಸ್ಟೋನ್ಸ್

ಡೊಮಿನಿಯಮ್ ರೀಫ್
ಗ್ರ್ಯಾನೈಟ್ ಪಿಲ್‍ಬಾರ(ಪ. ಆಸ್ಟ್ರೇಲಿಯ)
300

ಪ್ರಥಮ ತಳಭಾಗ, ಮಾಂಟಾನ ಆಂಟೇರಿಯೋ

ಬಾರ್ಬರ್ಟನ್ ಗ್ರೀನ್‍ಸ್ಟೋನ್ ಬೆಲ್ಟಿನ ರೂಪಾಂತರ 
ಸ್ವಾಜಿóಲೆಂಡ್ ಹಳೆಯ ಗ್ರ್ಯಾನೈಟ್
ರೂಪಾಂತರ 

320

340
360

	ಸಮಗ್ರ ವಯೋನಿರ್ಧಾರಗಳ ಪ್ರಾಮುಖ್ಯ ಮತ್ತು ಹಂಚಿಕೆ : ಪೂರ್ವ ಕೇಂಬ್ರಿಯನ್ ಕಾಲದ ಶಿಲೆಗಳ ವಯೋನಿರ್ಧಾರಗಳಿಂದ ಭೂಮಿಯ ಮೇಲೆ ಆ ಕಾಲದ ವಿವಿಧ ಹಂತಗಳನ್ನು ನಿರೂಪಿಸುವ ಕೆಲವು ನಿರ್ದಿಷ್ಟ ಭೂರಚನೆಗಳನ್ನು ತಿಳಿಯಬಹುದು. ಭೂ ಇತಿಹಾಸದಲ್ಲಿ ಮೊದಲ ಸುಮಾರು ನೂರು ಕೋಟಿ ವರ್ಷಗಳಷ್ಟು (ಸುಮಾರು ನಾನೂರ ಆರುವತ್ತು ಕೋಟಿ ವರ್ಷ ಪ್ರಾಚೀನದಿಂದ ಮುನ್ನೂರೈವತ್ತು ಕೋಟಿ ವರ್ಷ ಪ್ರಾಚೀನದ ತನಕ) ಪುರಾತನ ಶಿಲೆಗಳ ಮತ್ತು ಖನಿಜಗಳ ಪ್ರಾಯವನ್ನು ನಿರ್ಧರಿಸಲಾಗಿದೆ. ಆ ಒಂದು ಅವಧಿಯಲ್ಲಿ ಉತ್ಪತ್ತಿಯಾದ ಬಹಳಷ್ಟು ಶಿಲೆಗಳು ಕ್ರಮೇಣ ನಾಶ ಹೊಂದಿದ್ದುವು. ಅವುಗಳ ಮೂಲ ಲಕ್ಷಣಗಳಲ್ಲಿ ಗಣನೀಯವಾದ ಬದಲಾವಣೆಗಳಾಗಿರುವುದರಿಂದ ಅಂಥ ಶಿಲೆಗಳು ಉತ್ಪತ್ತಿಯಾದ ಕಾಲವನ್ನು ಕರಾರುವಾಕ್ಕಾಗಿ ರೇಡಿಯೋ ಮಾಪನ ವಿಧಾನಗಳಿಂದ ನಿರ್ಧರಿಸುವುದು ಸಾಧ್ಯವಿಲ್ಲ. ಈಗ ದೊರೆತಿರುವ ಸುಮಾರು ಮುನ್ನೂರ ಅರುವತ್ತು ಕೋಟಿ ವರ್ಷಗಳಿಗೂ ಪ್ರಾಚೀನದವೆಂದು ದೃಢೀಕರಿಸುವ ಶಿಲೆಗಳ ದಾಖಲೆಗಳು ಅತಿ ಅಪರೂಪ. ಗುರುತಿಸಲಾಗದಷ್ಟು ಬದಲಾದ ಅತಿ ಪುರಾತನ ಜಲಜ ಶಿಲೆಗಳು ಮತ್ತು ಅಗ್ನಿ ಶಿಲೆಗಳು ಸುಮಾರು ಮುವತ್ತೆಂಟು ಲಕ್ಷ ವರ್ಷಗಳಿಂದೀಚೆಗೆ ಕಂಡುಬಂದಿವೆ. ಇವಕ್ಕಿಂತ ಇನ್ನೂ ಪುರಾತನ ಶಿಲೆಗಳು ಪ್ರಾಯಶಃ ಇದ್ದಿರಬಹುದು. ಆದರೆ, ಅವುಗಳ ಅಸ್ತಿತ್ವವನ್ನು ರೇಡಿಯೋ ಮಾಪವ ವಿಧಾನಗಳಿಂದ ನಿರ್ಧರಿಸುವುದು ಇನ್ನೂ ಸಾಧ್ಯವಾಗಿಲ್ಲ. ಸುಮಾರು ಇನ್ನೂರ ಎಪ್ಪತ್ತು ಕೋಟಿ ವರ್ಷ ಪ್ರಾಚೀನದಿಂದ ಮುವತ್ತೆಂಟು ಲಕ್ಷ ವರ್ಷ ಪ್ರಾಚೀನದ ತನಕ ಭೂಮಿಯ ಮೇಲೆ ಉತ್ಪತ್ತಿಯಾದ ಜಲಜ ಶಿಲೆ ಮತ್ತು ಅಗ್ನಿ ಶಿಲೆಗಳು ಯಾವಾಗಲೂ ವಿರೂಪಗೊಂಡಿರುವುದು ಕಂಡುಬಂದಿದೆ. ಅವು ರೂಪಾಂತರಗೊಂಡಿರುವುದೂ ಗಮನಾರ್ಹವಾದ ಅಂಶ. ಸಮತಟ್ಟಾಗಿ ರಚಿತವಾದ ಜಲಜ ಶಿಲೆಗಳ ಮತ್ತು ಅಗ್ನಿಶಿಲೆಗಳ ಪರಂಪರೆಗಳು ದಕ್ಷಿಣ ಆಫ್ರಿಕದ ವಿಟ್ ವಾಟರ್ಸ್ ರ್ಯಾಂಡ್ ತಗ್ಗು ಪ್ರದೇಶದ ಕೆಳಭಾಗದಲ್ಲಿವೆ. ಮಡ್ಡಿ ಸಂಸ್ತರಗಳುಳ್ಳ ಈ ಪ್ರದೇಶದ ನಿರ್ಮಾಣ ಸುಮಾರು ಇನ್ನೂರ ಎಪ್ಪತ್ತು ಕೋಟಿ ವರ್ಷಗಳ ಹಿಂದೆ ಪ್ರಾರಂಭವಾಯಿತು. ಇದು ಭೂಮಿಯ ವಿಕಾಸದಲ್ಲಿ ಒಂದು ಹೊಸ ಘಟ್ಟವನ್ನು ಸ್ಥಾಪಿಸಿದಂತೆ ಕಂಡುಬರುತ್ತದೆ. ಏಕೆಂದರೆ ಭೂತೊಗಟೆಯ ಒಂದು ಭಾಗ ಆ ವೇಳೆಗಾಗಲೇ ಸಾಕಷ್ಟು ಗಡಸಾಗಿದ್ದು ಅದರ ಮೇಲ್ಭಾಗದಲ್ಲಿ ಸಂಗ್ರಹವಾದ ಜಲಜ ಶಿಲೆಗಳು ಅಲ್ಪಸ್ವಲ್ಪ ಬದಲಾವಣೆಗಳಿಗೆ ಒಳಗಾಗಿರುವುದು ಇದರಿಂದ ವ್ಯಕ್ತವಾಗುತ್ತದೆ. 

	ಭೂತೊಗಟೆಯ ಒಳಭಾಗ ಕ್ರಮಶಃ ಗಡಸಾದುದನ್ನು ಅನೇಕ ಡಯಬೇಸಿಕ್ ಡೈಕುಗಳು ತೊರಿಸಿವೆ. ಭೂತೊಗಟೆಯಲ್ಲಿ ಹಲವು ನೂರು ಕಿ.ಮೀ.ಗಳಷ್ಟು ವ್ಯಾಪಕವಾಗಿ ಹರಡಿರುವ ದೊಡ್ಡ ಬಿರುಕತನ ಅಥವಾ ಸಂದುಗಳಲ್ಲಿ ಈ ಡೈಕುಗಳು ತುಂಬಿ ಹೋಗಿವೆ. ಮೊತ್ತಮೊದಲು ರಚಿತವಾದ ಡೈಕ್ ಸಮುದಾಯಗಳು ಇನ್ನೂರ ಐವತ್ತು ಕೋಟಿ ವರ್ಷಗಳಷ್ಟು ಪ್ರಾಚೀನದಿಂದ ಇಪ್ಪತ್ತನಾಲ್ಕು ಲಕ್ಷ ವರ್ಷಗಳಷ್ಟು ಪ್ರಾಚೀನವಾದವೆಂದು ನಿರ್ಧರಿಸಲಾಗಿದೆ. ಈ ಡೈಕುಗಳು ರಚನೆಗೊಂಡಾಗ ಮತ್ತು ತಗ್ಗು ಪ್ರದೇಶಗಳಲ್ಲಿ ಬದಲಾವಣೆಗಳಾದಾಗ ಕೆಲವು ನಿಕ್ಷೇಪಗಳು ಬದಲಾಗದೆ ಉಳಿದವು. ಎಂದೇ ಕೆಲವು ನಿರ್ದಿಷ್ಟ ಸ್ಥಿರ ಭಾಗಗಳು ಇತರ ಚಲಿಸುವ ಸಾಮಥ್ರ್ಯವುಳ್ಳ ಭಾಗಗಳಿಂದ ನಿರ್ದಿಷ್ಟವಾಗಿ ಪ್ರತ್ಯೇಕಗೊಂಡು ಕಂಡುಬಂದಿವೆ. ಪೂರ್ವ ಕೇಂಬ್ರಿಯನ್ ಕಾಲದ ಪ್ರಾರಂಭದಲ್ಲಿ, ಚಲಿಸುವ ಸ್ಥಿತಿಯಲ್ಲಿದ್ದ ಪ್ರತಿಯೊಂದು ಭೂಭಾಗವನ್ನು ಪ್ರತ್ಯೇಕವಾಗಿ ಗುರುತಿಸುವುದು ಅಸಾಧ್ಯ. ಇಡೀ ಭೂತೊಗಟೆ ಚಲಿಸುವ ಸ್ಥಿತಿಯಲ್ಲಿದ್ದುದೇ ಇದರ ಕಾರಣ. ಆದರೆ ಒಮ್ಮೆ ಸ್ಥಿರ ಭಾಗಗಳ ರಚನೆಯಾಯಿತೆಂದರೆ, ಭೂಕಾಲದ ಯಾವುದೇ ವೇಳೆಯಲ್ಲಿ ಭೂತೊಗಟೆಯಲ್ಲಿ ಸ್ಥಿರ ಮತ್ತು ಗಡಸಾದ ಪ್ರದೇಶವನ್ನು ಒಳಗೊಂಡ ಮತ್ತು ಚಲಿಸುವ ಸ್ಥಿತಿಯಲ್ಲಿದ್ದ ಭಾಗಗಳ ಜಾಲವಿತ್ತೆಂದು ಪರಿಗಣಿಸಬಹುದು.
											(ಎಂ.ಎಸ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ